ಚಂದಿರನ ಲೋಕದಲಿ
"ಚಂದಮಾಮ ಚಂದಮಾಮ ಓಡಿ ಬಾ
ಚಿಗರೆಯ ಮೇಲೆ ಕುಳಿತು ಬಾ
ಹಾಲನು ನಿನಗೆ ಕೊಡುವೆನು ಬಾ
ಬೆಳದಿಂಗಳ ಹಾಸಿಗೆ ಹಾಸಲು ಬಾ"
ಬಾಲಮಂದಿರದ ತರಗತಿಯೊಳಗೆ ಚಂದಿರನ ಕುರಿತು ಹೇಳಿಸಿದ ಈ ಗೀತೆಯನು ಗೋಪಿ ತಾಯಿಯ ಮುಂದೆ ಹೇಳಿ ಕುಣಿದು ತೋರಿಸಿದ. ಗೋಪಿಯ ತಾಯಿಗೆ ಮಗನ ಹಾಡು ಕೇಳಿ ಬಹಳ ಸಂತೋಷವಾಯಿತು. ಗೋಪಿಗೆ ಆಲಂಗಿಸಿಕೊಂಡು ತಿಂಡಿ ತಿನಸಿ, ಹಾಲು ಕುಡಿಸಿ ಕಳುಹಿಸಿದಳು. ಆಟವಾಡಿ ದಣಿದು ಸಂಜೆ ಮನೆಗೆ ಬಂದ ಗೋಪಿ ಊಟ ಮಾಡಿ ಬೇಗನೆ ಮಲಗಿದನು.
ಅವನು ಮಲಗಿದ ಕೆಲವು ಸಮಯದ ನಂತರ ಕಿಡಕಿಯ ಹೊರಗಡೆಯಿಂದ ಯಾರೋ "ಗೋಪಿ ಬಾರೋ.... ಬೇಗ ಬಾ" ಎಂದು ಕರೆದಂತಾಯಿತು. ಗೋಪಿ ಕರೆ ಬಂದ ಕಡೆಗೆ ಹೋಗಿ ನೋಡಿದರೆ ಬಿಳಿಯಾದ ಉಡುಗೆ, ಬಿಳಿ ಕಿರೀಟ ಹಾಕಿಕೊಂಡು ನಿಂತ ಚಂದಮಾಮ ಕಂಡನು.
ಗೋಪಿ ಚಂದಮಾಮನ ನೋಡಿ ಖುಷಿಯಿಂದ ಕುಣಿದಾಡಿ ಅವನ ಬಳಿ ಓಡಿ ಬಂದು ನಿಂತುಕೊಂಡು "ಐಯ್.... ಚಂದಮಾಮ ನೀನು! ಭೂಮಿಗೆ ಹೇಗೆ ಬಂದೆ?" ಎಂದು ಸೋಜಿಗದಿಂದ ಕೇಳಿದಾಗ ಚಂದಮಾಮ "ಗೋಪಿ ನಾನು ನಿನಗೆ ಕರೆದುಕೊಂಡು ಹೋಗಲು ಆಗಮಿಸಿರುವೆ ಬಾ ಚಂದಿರನ ಲೋಕಕೆ ಹೋಗೋಣ" ಎಂದು ಹೇಳಿ ಗೋಪಿಯ ಕರ ಹಿಡಿದು ಚಿಗರೆಯ ರಥವನೇರಿ ಕರೆದುಕೊಂಡು ಹೊರಟನು.
ಚಿಗರೆಯ ರಥದಲಿ ಕುಳಿತಿರುವ ಗೋಪಿ ಆನಂದದಿಂದ ಓಲಾಡಿದನು. ಕೆಳಗೆ ಇಣುಕಿ ನೋಡಿದರೆ ಸುಂದರ ಭೂಮಿ ಇರುಳಿನಲಿ ಬೆಳಕಿನ ದೀಪ ಕಂಡಂತೆ ಕಾಣುತಿದೆ. ಮೋಡಗಳು ರಥವನು ಸಾವರಿಸಿಕೊಂಡು ಸಾಗುತಿವೆ. ಗೋಪಿ ಚಂದಮಾಮನ ಕರವನು ಬಿಗಿಯಾಗಿ ಹಿಡಿದು ಕುಳಿತುಕೊಂಡನು. ಚಿಗರೆಯ ತೇರು ಭಾರೀ ವೇಗದಲಿ ಆಗಸದಲಿ ಸಾಗತೊಡಗಿತು.
ಕೆಲವು ನಿಮಿಷಗಳ ನಂತರ ಗೋಪಿ ಚಂದಿರನ ಲೋಕ ತಲುಪಿದನು. ಚಂದಿರನ ಲೋಕ ಬೆಳದಿಂಗಳ ಲೋಕ. ಬಿಳಿ ಮೋಡಗಳು, ಬಿಳಿ ಶಿಖರಗಳು, ಬಿಳಿಯಾದ ಉಡುಗೆ-ತೊಡುಗೆಗಳು, ಬಿಳಿ ಫಲಗಳು, ಬಿಳಿಯಾದ ಹೊಳೆಯುವ ಹೂವುಗಳು, ಬಿಳಿ ಹಾಸು ಹಾಸಿದ ದಾರಿಗಳು ಓಹ್! ಗೋಪಿಯ ಮುಖದ ತುಂಬಾ ಸಂತೋಷದ ಹೊನಲು ಹರಿಯಿತು.
ಚಂದಮಾಮ ಗೋಪಿಗೆ ಹಲವು ಆಟ ಆಡಿಸಿದನು. ಬಗೆಬಗೆ ಸಿಹಿತಿಂಡಿಯ ತಿನಿಸಿದನು. ಕುಡಿಯಲು ಬೆಳದಿಂಗಳನೇ ನೀಡಿದನು. ಚಂದಿರನ ಲೋಕದಲಿ ಆಟ ಆಡಲು ಗೆಳೆಯರು ಬೇಕೆಂದು ಗೋಪಿ ಬಯಸಿದ ಕೂಡಲೇ ಅವನ ತರಗತಿ ಗೆಳೆಯರು ಓಡೋಡಿ ಬಂದು ಕಚಗುಳಿ ನೀಡಿ "ಗೋಪಿ ನೋಡು ನಾವು ಬಂದೆವು" ಎಂದು ಹೇಳಿ ಅವನ ಜೊತೆ ಸೇರಿಕೊಂಡು ಆಟ ಆಡತೊಡಗಿದರು.
ಗೋಪಿ ಹಾಗೂ ಅವನ ಗೆಳೆಯರು ಬಿಳಿ ಕುದುರೆಗಳ ಮೇಲೆ ಕುಳಿತು ಚಂದಿರನ ಲೋಕವನು ತಿರುಗಿದರು. ಚಿಗರೆಗಳ ಜೊತೆ ಜಿಗದಾಡಿದರು. ಬಗೆಬಗೆ ಫಲಗಳ ರುಚಿ ಸವಿದರು.
ಕೆಲವು ಸಮಯದ ನಂತರ ಬೆಳದಿಂಗಳು ಕರಗ ತೊಡಗಿತು. ಗೋಪಿ ಚಂದಮಾಮನ ಬಳಿ ಓಡಿಬಂದು "ಚಂದಮಾಮ ಚಂದಮಾಮ ಬೆಳದಿಂಗಳು ಕರಗತೊಡಗಿದೆ ಏಕೆ" ಎಂದು ಗಾಬರಿಯಿಂದ ಕೇಳಿದನು.
ಚಂದಮಾಮ ನಸುನಗೆ ತುಂಬಿಕೊಂಡು "ಗೋಪಿ ಈಗ ರವಿ ಉದಯಿಸುವ ಸಮಯ ಆರಂಭವಾಗಿದೆ ರವಿ ಕಿರಣಗಳು ಬೆಳದಿಂಗಳನು ಕರಗಿಸತೊಡಗಿವೆ. ನೀವು ಈಗಿಂದೀಗಲೇ ಭೂಮಿಗೆ ಮರಳಿ ಹೋಗಬೇಕು" ಎಂದು ಹೇಳಿದನು. ಚಂದಮಾಮನ ಮಾತು ಕೇಳಿ ಗೋಪಿಗೆ ಅಳು ಬಂದು "ಬೇಡ ಬೇಡ ನಮಗೆ ಭೂಮಿಗೆ ಕಳುಹಿಸಬೇಡ... ಮಾಮಾ" ಎಂದು ಜೋರಾಗಿ ಅಳತೊಡಗಿದನು.
"ಗೋಪಿ ಗೋಪಿ ಏನಾಯಿತು ಮಗನೇ ಏನಾದರೂ ಕನಸು ಕಂಡೆಯಾ" ಎಂದು ಗೋಪಿಯ ತಾಯಿ ಅವನ ತಲೆ ಸವರಿ ಕೇಳಿದಳು. ಗೋಪಿ ನಿಧಾನವಾಗಿ ತಾಯಿಯ ಬಳಿ ಸರೆದು ಅವಳ ತೊಡೆಯ ಮೇಲೆ ತಲೆ ಹಾಕಿ ಮಲಗಿ "ಹೂಂ... ಚಂದಿರ ಲೋಕದ ಕನಸು ಕಂಡೆ" ಎಂದು ಮುಖದಲಿ ನಸುನಗೆ ತುಂಬಿಕೊಂಡು ಹೇಳಿದನು.
ತಾಯಿ "ಬರೀ ಕನಸು ಕಂಡರೆ ಹೇಗೆ? ಬೇಗ ಏಳು ಶಾಲೆಯ ಸಮಯವಾಯಿತು" ಎಂದು ಹೇಳಿ ಹುಸಿಕೋಪ ತೋರಿಸಿ ಹೊರಟುಹೋದಳು. ಗೋಪಿ ಮುಸುಗೆಳೆದುಕೊಂಡು
"ಚಂದಮಾಮ ಚಂದಮಾಮ ಓಡಿ ಬಾ
ಚಿಗರೆಯ ಮೇಲೆ ಕುಳಿತು ಬಾ" ಎಂದು ಹಾಡನು ಹಾಡತೊಡಗಿದನು.
By RSPatil Laxmeshwar.










ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ