ಕಿಲಾಡಿ ಕೋತಿಮರಿ
ಅದೊಂದು ಸುಂದರವಾದ ಕಾಡು, ಕಾಡಿನ ನಡುವೆ ಜುಳುಜುಳನೇ ಹರಿಯುವ ತೊರೆ, ತೊರೆಯ ದಂಡೆಯ ಮೇಲೆ ಬೆಳೆದು ನಿಂತಿರುವ ಸದಾ ಹಸಿರಿನಿಂದ ಕೂಡಿದ ವಿಶಾಲವಾದ ಮರಗಳು, ಹೂವಿನ ಭಾರದಿಂದ ತೂಗಾಡುವ ಚಂದದ ಹೂಗಿಡಗಳು, ಮರಗಿಡಗಳನು ಬಳಸಿ ನಿಂತ ಲತೆಗಳು, ಹೂವಿನ ಮಕರಂದ ಹೀರಲು ತಾ ಮುಂದು ತಾ ಮುಂದು ಎಂದು ಸಿಂಗಾರದಿಂದ ಹಾರುವ ದುಂಬಿಗಳು.
ದಂಡೆಯ ಮೇಲಿರುವ ಅತಿ ವಿಶಾಲವಾದ ಮರದ ಮೇಲೆ ಒಂದು ಕೋತಿ ಹಾಗೂ ಅದರ ಮರಿ ವಾಸವಾಗಿವೆ. ಕೋತಿಯ ಮರಿ ಬಲು ಕಿಲಾಡಿ. ತಾಯಿ ಬೇಡವೆಂದರೂ ಮರದಿಂದ ಕೆಳಗೆ ಇಳಿಯುವುದು, ತೊರೆಯ ಬಳಿ ಹೋಗುವುದು, ಹೂ ಕೀಳುವುದು,ದುಂಬಿ ಓಡಿಸುವುದು ಇವೇ ಮುಂತಾದ ಕೀಟಲೆಗಳು. ತಾಯಿ ಕೋತಿಗೆ ಮರಿ ಕೋತಿಯನು ಕಾಯುವುದೇ ಒಂದು ಕೆಲಸ. ಆ ತೊರೆಗೆ ನೀರು ಕುಡಿಯಲು ಹುಲಿ, ಸಿಂಹ, ಚಿರತೆ, ಆನೆ, ತೋಳಗಳೂ ಬರುವುದರಿಂದ ತಾಯಿ ಕೋತಿಗೆ ಬಹಳ ಚಿಂತೆ. ತಾಯಿ ಕೋತಿ ಮರಿ ಕೋತಿಗೆ ಏನು ಹೇಳಿದರೂ ಕೇಳದೆ ಅದೇ ತೊರೆಯ ಬಳಿ ಹೋಗಿ ಆಟವಾಡುವುದು.
ಹೀಗೆ ಒಂದು ದಿನ ಕಿಲಾಡಿ ಕೋತಿಮರಿ ತೊರೆಯ ಬಳಿ ಕುಳಿತಿರುವಾಗ ನೀರು ಕುಡಿಯಲು ಬಂದ ಆನೆಯ ಮರಿಯೊಂದು ಭೇಟಿಯಾಯಿತು. ಆನೆಮರಿ "ಹಲೋ ಗೆಳೆಯಾ.. ನಾನು ನಿನಗೆ ಕಾಡಿನ ವಿಹಾರ ಮಾಡಿಸುವೆ ಬರುವೆಯಾ" ಎಂದು ಕೇಳಿತು. ಕೋತಿಮರಿ ಆನೆಮರಿಯ ಮಾತು ಕೇಳಿ "ಬೇಡ ಬೇಡ ನನಗೆ ಭಯ ಆಗುವುದು" ಎಂದು ಹೇಳಿದಾಗ ಆನೆ ಮರಿ "ಭಯ ಬೇಡ ಗೆಳೆಯಾ..
ಬಾ ಮೇಲೆ ಕುಳಿತುಕೋ ನಾನು ನಿನಗೆ ಏನು ತೊಂದರೆ ಆಗದಂತೆ ಕರೆದುಕೊಂಡು ಹೋಗುವೆ" ಎಂದು ಅಭಯ ನೀಡಿತು. "ಹಾಗಾದರೆ ಓಕೆ" ಎಂದು ಚಂಗನೆ ಹಾರಿ ಆನೆಮರಿಯ ಮೇಲೆ ಕುಳಿತುಕೊಂಡು "ಹೊರಡಲಿ ಆನೆಯ ಸವಾರಿ" ಎಂದು ಖುಷಿಯಿಂದ ಕೋತಿಮರಿ ಹೇಳಿತು.
ಆನೆ ಮರಿ ಹಾಗೂ ಕೋತಿ ಮರಿಗಳು ಇಡೀ ಕಾಡಿನ ತುಂಬಾ ಅಲೆದಾಡಿದವು. ಕೋತಿಮರಿ ಗಿಡಗಳ ಮೇಲೆ ಏರಿ ರುಚಿರುಚಿ ಫಲಗಳನು ಆನೆಮರಿಗೆ ನೀಡಿ ತಾನೂ ತಿಂದು ಬೀಗಿತು. ಜಲಪಾತದ ಕೆಳಗೆ ಹೋಗಿ ನೀರಿನ ಆಟ ಆಡಿದವು. ನಂತರ ಎರಡೂ ಸೇರಿಕೊಂಡು ಬಗೆಬಗೆ ಆಟಗಳನು ಆಡಿ ನಲಿದಾಡಿದವು. ತೊರೆಯ ಬಳಿ ಕೋತಿ ಮರಿಯ ತಾಯಿ ಗಾಬರಿಯಿಂದ ಹುಡುಕತೊಡಗಿತು. ಗಿಡಗಳಿಂದ ಗಿಡಗಳಿಗೆ ಜಿಗಿದು ನೋಡಿದರೂ ಕೋತಿಮರಿ ಕಾಣದೆ ಹೋಯಿತು. ತಾಯಿ ಕೋತಿ ಹುಡುಕುತಾ ಹುಡುಕುತಾ ತುಂಬಾ ದೂರ ಸಾಗಿದರೂ ಕೋತಿಮರಿ ಕಾಣದಾಯಿತು. ಮರಳಿ ಮನೆಗೆ ಬಂದು ತಾಯಿ ಕೋತಿ ಕಂಬನಿಗರೆಯುತ ಕುಳಿತುಕೊಂಡಿತು. ಸಂಜೆಯಾಗತೊಡಗಿದೊಡನೆ ಮರಿ ಕೋತಿಗೆ ತಾಯಿಯ ನೆನಪಾಯಿತು. ಆನೆಯ ಮರಿಗೆ "ಗೆಳೆಯಾ ಸಂಜೆಯಾಗುತಿದೆ ನಾನು ಮರಳಿ ತಾಯಿ ಬಳಿಗೆ ಹೋಗಬೇಕು ದಯಮಾಡಿ ಕರೆದುಕೊಂಡು ಹೋಗು" ಎಂದು ಬೇಡಿಕೊಂಡಿತು. ಆನೆಮರಿ "ಹೌದು ಸಂಜೆಯಾಗುತಿದೆ ನಡೆ ಹೋಗೋಣ ಆದರೆ..
ಮರಳಿ ಬರುವಾಗ ನಾನು ಹೇಗೆ ಬರಲಿ.... ನನಗೂ ಭಯ" ಎಂದು ಹೇಳಿತು.ಆನೆಮರಿಯ ಮಾತು ಕೇಳಿ ಮರಿ ಕೋತಿ ತಾಯಿ ಕೋತಿಯನು ನೆನೆದು ಅಳತೊಡಗಿತು. ಅದರ ಅಳು ಕೇಳಿ ಆನೆಮರಿಯ ತಾಯಿ ಅದರ ಬಳಿಬಂದು "ಮಗು ಅಳಬೇಡ ನಾನು ನಿನಗೆ ಕರೆದುಕೊಂಡು ಹೋಗುವೆ ಬಾ" ಎಂದು ಮೇಲೆ ಕೂರಿಸಿಕೊಂಡು ತೊರೆಯ ಬಳಿ ಬಂದು ನಿಂತಿತು.ತೊರೆ ಬಂದ ಕೂಡಲೇ ಛಂಗನೇ ಹಾರಿ ಕೋತಿ ಮರಿ ತಾಯಿ ಇರುವ ಗಿಡದ ಬಳಿ ಓಡಿ ಹೋಯಿತು. ದಿಢೀರನೆ ಬಂದ ಮರಿ ಕೋತಿಯನು ನೋಡಿ ತಾಯಿ ಕೋತಿಗೆ ದುಃಖ ಕಡಿಮೆಯಾಗಿ ಸಂತೋಷದಿಂದ ಮರಿಗೆ ಆಲಂಗಿಸಿಕೊಂಡಿತು. ಮರಿ ಕೋತಿ ತಾಯಿಗೆ ನಡೆದ ವಿಷಯ ತಿಳಿಸಿತು. ಆಗ ತಾಯಿ ಕೋತಿ ಮರದಿಂದ ಇಳಿದುಬಂದು ಆನೆಮರಿಯ ತಾಯಿಗೆ ಕರಜೋಡಿಸಿ ನಮಿಸಿತು. ಆನೆಮರಿ ಸೊಂಡಿಲಿನಿಂದ ಕೋತಿಮರಿಯ ತಲೆ ನೇವರಿಸಿ "ಈಗ ಸಮಾಧಾನ ಆಯಿತಾ ಮರಿ.... ಸರಿ ನಾನು ಹೊರಡುವೆ" ಎಂದು ಹೇಳಿ ಎರಡು ಕೋತಿಗಳಿಗೂ ಟಾಟಾ ಮಾಡಿ ಹೊರಟುಹೋಯಿತು. ತಾಯಿ ಹಾಗೂ ಮರಿಕೋತಿ ಸಂತೋಷದಿಂದ ಮರ ಏರಿ ಕುಳಿತವು.
By RSPatil.
Laxmeshwar.










Super sir
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿSuper...
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿ