ಹುಣಸೆ ಚಿಗಳೆ.


      


ರೇಖಾ, ಫಾತಿಮಾ, ಸರೋಜಾ ಹಾಗೂ ಜಾನು ಇವರು ಐದನೇ ತರಗತಿ ಓದುವ ಗೆಳತಿಯರು. ಇವರ ಮನೆಗಳು ಆಜುಬಾಜು ಇರುವುದರಿಂದ ಯಾವಾಗಲೂ ಒಂದುಗೂಡಿಯೇ ಶಾಲೆಗೆ ಬರುವುದು ಹೋಗುವುದು ಮಾಡುವರು. ಹಾಗೆಯೇ ತರಗತಿಯೊಳಗೂ, ತಿಂಡಿ, ಊಟದ ಸಮಯದೊಳಗೂ ಒಂದುಗೂಡಿಯೇ ಇರುವರು. ಒಂದು ಶನಿವಾರ ಶಾಲೆ ಒಳಗೆ ತಿಂಡಿ ಸೇವಿಸುತಾ ರೇಖಾ ಗೆಳತಿಯರನು ಕುರಿತು "ಫಾತಿಮಾ ನಾಳೆ ರವಿವಾರ ಕಣೇ ಏನು ಮಾಡೋಣ....."? ಎಂದು ಕೇಳಿದಳು. ಫಾತಿಮಾ "ಹೂಂ ಕಣೆ ನಂದು ಅದೇ ಯೋಚನೆ. ಲೇ.. ಸರೂ ನೀನೆ ಹೇಳು ಏನು ಮಾಡೋಣ"? ಎಂದು ಸರೋಜಳಿಗೆ ಒಂದು ತಿವಿದಳು. ಸರೋಜಾ "ತಿವಿಯಬೇಡವೇ ಹಾಗೆ ಕೇಳು" ಎಂದು ಕೋಪಿಸಿಕೊಂಡು ಕುಳಿತಳು. ಜಾನು ಸರೋಜಳಿಗೆ ಸಮಾಧಾನಪಡಿಸಿ "ನೋಡಿ ನಾಳೆ ನಾವು ಕೆರೆ ದಂಡೆಗೆ ಹೋಗೋಣ ಓಕೆ ನಾ.." ಎಂದು ಗೆಳತಿಯರಿಗೆ ಹೇಳಿದಳು.


ಫಾತಿಮಾ "ಕೆರೆ ದಂಡೆನಾ.... ವಾರ ವಾರ ಕೆರೆ ದಂಡೆಗೆ ಹೋಗುವುದು ಬೇಜಾರು... ಬೇಡ ಬೇಡ ಬೇರೆ ಕಡೆ ಹೋಗೋಣ" ಎಂದು ಮುಖ ಸಿಂಡರಿಸಿದಳು.ಜಾನು "ಹೌದು ವಾರ ವಾರ ಕೆರೆ ದಂಡೆಗೆ ಆಟವಾಡಲುಹೋಗುವುದು ನಿಜ ಆದರೆ ಈ ಬಾರಿ ವಿಶೇಷವಾಗಿ ಏನಾದರೂ ಮಾಡೋಣ" ಎಂದು ಹೇಳಿ ರೇಖಾಳ ಮುಖ ನೋಡಿದಳು. ರೇಖಾ ಕೊಂಚ ನಿಮಿಷ ಯೋಚಿಸಿ "ಜಾನಿ ಹೇಳೋದು ಸರಿ ಇದೆ. ನಾವು ಈ ಬಾರಿ ಕೆರೆಗೆ ದಂಡೆಗೆ ಹೋಗಿ ಹುಣಸೆ ಚಿಗಳೆ ಮಾಡೋಣ" ಎಂದು ಖುಷಿಯಿಂದ ಹೇಳಿದಳು. ರೇಖಾ ಹುಣಸೆ ಚಿಗಳೆ ಎಂದಕೂಡಲೇ ಗೆಳತಿಯರ ಬಾಯಿಯೊಳಗೆ ನೀರು ಬಂದು ನಿಂತವು. ಫಾತಿಮಾ "ವಾವ್! ಹುಣಸೆ ಚಿಗಳೆನಾ.. ಓಕೆ ಓಕೆ ನಾನು ರೆಡಿ" ಎಂದು ಹೇಳಿ ತಿಂಡಿ ಮುಗಿಸಿದಳು. ಸರೋಜಾ, ಜಾನಿಗೂ ರೇಖಾಳ ಐಡಿಯಾ ಓಕೆ ಆಯಿತು.


ಹುಣಸೆ ಚಿಗಳೆ ರೆಡಿ ಮಾಡಲು ಬೇಕಾದ ಸಾಮಾನುಗಳನು ಮನೆಯಿಂದ ತರಲು ತಾವೇ ಹಂಚಿಕೊಂಡು "ನಾಳೆ ಸರಿಯಾಗಿ ಒಂದು ಗಂಟೆಗೆ ಕೆರೆ ದಂಡೆಗೆ ಹೊರಡೋಣ" ಎಂದು ಹೇಳಿ ತಿಂಡಿ ಮುಗಿಸಿ ಖುಷಿಯಿಂದ ತರಗತಿಯೆಡೆಗೆ ಸಾಗಿದರು.

ರವಿವಾರ‌ ಗೆಳತಿಯರು ಸರಿಯಾಗಿ ಒಂದು ಗಂಟೆಗೆ ರೆಡಿಯಾಗಿ ಹುಣಸೆ ಚಿಗಳೆಗೆ ಬೇಕಾದ ಸಾಮಾನುಗಳನು ಕಳವು ಮಾಡಿಕೊಂಡು ತಾಯಿಯ ಮುಂದೆ ಆಟವಾಡಲು ಹೋಗುವೆವು ಎಂದು ಹೇಳಿ ಕೆರೆ ದಂಡೆಗೆ ಬಂದು ಸೇರಿದರು.ಕೆರೆ ದಂಡೆಯ ಮೇಲೆ ಹಲವು ಗಿಡಗಳು ಸೊಂಪಾಗಿ ಬೆಳೆದು ಉಂಟಾದ ನೆರಳಿನ ಕೆಳಗೆ  ಕುಳಿತುಕೊಂಡು ತಾವು ಕಳುವು ಮಾಡಿಕೊಂಡು ತಂದಿರುವ  ಸಾಮಾನುಗಳನು ಒಂದೊಂದಾಗಿ ಹೊರ ತೆಗೆದರು. ಫಾತಿಮಾ ಹಾಗೂ ರೇಖಾ ತಂದ


ಸಾಮಾನುಗಳನು ಬಳಸಿ  ಹುಣಸೆ ಚಿಗಳೆ ಅರಿಯತೊಡಗಿದರು.ಸರೋಜಾ, ಜಾನಿ ಅವರಿಗೆ ಸಹಾಯ ಮಾಡಿದರು. ಕೆಲವು ಸಮಯದ ನಂತರ ಬಾಯಿಯೊಳಗೆ ನೀರು ತರಿಸುವ ಹುಣಸೆ ಚಿಗಳೆಯ ಸುವಾಸನೆ ಮೂಗಿಗೆ ಬಡಿದು ಗೆಳತಿಯರು ಸಂತೋಷಗೊಂಡರು. ತಾವು ಆರೆದ ಹುಣ‌ಸೆ ಚಿಗಳೆಯ ರುಚಿ ನೋಡಲು ಕಾತುರರಾಗಿ ಬೆರಳಿನಿಂದ ಕೊಂಚ ಕೊಂಚ ತೆಗೆದುಕೊಂಡು ಚೀಪತೊಡಗಿದರು.ಹುಳೀ,ಖಾರ,ಸಿಹೀ ಸೇರಿಸಿ ತಯಾರಾದ ಹುಣಸೆ ಚಿಗಳೆಯ ಚೀಪುತಾ "ಸ್... ಹಾ.. ಖಾರಾ...,ಹೂಂ..ಹುಳೀ...ಹುಳೀ,ಉಮ್....ಸಿಹೀ ಸಿಹೀ, ವಾವ್ ಏನು ರುಚಿ ಕಣೇ...ಹೂಂ ತುಂಬಾ ರುಚಿಯಾಗಿದೆ" ಎಂದು ಹೇಳಿಕೊಂಡು ಹುಣಸೆ ಚಿಗಳೆಯ ರುಚಿ ಸವಿದರು. 


ನಂತರ ಕೆರೆಯ ದಂಡೆಯ ಗಿಡಗಳ ನೆರಳಿನೊಳಗೆ ಮರಕೋತಿಯಾಟ, ಚೆಂಡಿನಾಟ ಆಡಿ ಆಡಿ ದಣಿದು ಉಳಿದ ಹುಣಸೆ ಚಿಗಳೆಯನು ಬೆರಳಿಗೆ ಸವರಿಕೊಂಡು ಬಾಯಿಂದ ಚೀಪುತ ಮನೆಯ ಕಡೆಗೆ ಹೊರಟರು.ಇವರು ಹುಣಸೆ ಚಿಗಳೆ ಚೀಪುವುದು ಕಂಡು ದಾರಿಹೋಕರ ಬಾಯಿಯೊಳಗೂ ನೀರು ಜಿನಗ ತೊಡಗಿದವು.

By RSPatil, Laxmeshwar.



          


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಂದಿರನ ಲೋಕದಲಿ