ಹೊಸ ಅತಿಥಿ


     


ಕೆಲವೇ ದಿನಗಳ ನಂತರ ಮನೆಗೆ ಹೊಸ ಅತಿಥಿ ಬರುವ ವಿಷಯ ಗೌರಿಯ ತಾಯಿ ಅವಳಿಗೆ ತಿಳಿಸಿದಾಗಿನಿಂದ  ಗೌರಿಗೆ ಖುಷಿಯೋ ಖುಷಿ.ಹೊಸ ಅತಿಥಿ  ಬರುವ ದಿನಗಳನು ಎಣಿಸುತಾ  ಗೌರಿ ಕಾತುರದಿಂದ ಕಾಯತೊಡಗಿದಳು.


















" ಗೌರಿ ಬೇಗ ಬಾ,  ಹೊಸ ಅತಿಥಿ ಬಂದಿದೆ ನೋಡು ಬಾ" ಎಂದು  ಗೌರಿಯ ತಾಯಿ  ಮನೆಯ ಹಿಂಬಾಗಿಲಿನಿಂದ  ಕರೆದರು.ತಾಯಿ ಕರೆಯುವುದನು ಕೇಳಿ ಲಗುಬಗೆಯಿಂದ ಹಿಂಬಾಗಿಲಿನ ಕಡೆ ಓಡಿ ಹೋಗಿ ನೋಡಿದಾಗ ಗೌರಿಯ ಒಲುಮೆಯ ಹಸು ತುಂಗಾ ಆಗ ತಾನೇ ಜನಿಸಿದ ಅದರ ಕರುವಿನ ಜೊತೆ ನಿಂತಿದೆ. ಹಸು ತುಂಗಾ ಹಾಗೂ ಅದರ ಕರು ನೋಡಿ ಗೌರಿಯ ಮುಖ ಕಮಲದಂತೆ ಅರಳಿತು. ಖುಷಿಯಿಂದ ಕುಣಿದಾಡಿದಳು. ಮನೆಯಿಂದ ಹೊರಗೆ ಬಂದು ಇಡೀ ಓಣಿಗೆ ಕೇಳಿಸುವ ಹಾಗೆ "ತುಂಗಾ ಹಸು ಕರು ಹಾಕಿದೆ" ಎಂದು ಕೂಗಿ ಕೂಗಿ ಹೇಳಿದಳು. ತುಂಗಾ ಹಸು ಕರು ಹಾಕಿರುವ ವಿಷಯ ಕೇಳಿ ನೆರೆಹೊರೆಯವರೂ ಆನಂದಿತರಾದರು.

       


ತುಂಗಾ ತುಂಬಾ ವಿಶೇಷವಾದ ಹಸು. ಒಂದು ದಿನ ಸಂಜೆ ಗೌರಿಯ ತಂದೆ ಹಾಗೂ ಗೌರಿ ಹೊಲದಿಂದ  ಮರಳಿ ಬರುವಾಗ ಕೆರೆಯ ಮೇಲಿರುವ  ಪೊದೆಗಳಿಂದ ಏನೋ ಮಿಸಿಕಿದಂತಾಯಿತು. ಗೌರಿಯ ತಂದೆ ಸಮೀಪ ಹೋಗಿ ನೋಡಿದಾಗ ಒಂದು ಪುಟಾಣಿ ಆಕಳ ಕರು ಹೊರಬರಲಾಗದೆ ಕುಳಿತಿದೆ. ಗೌರಿಯ ತಂದೆ ನಿಧಾನವಾಗಿ ಪೊದೆಗಳನ್ನು ಸರಸಿ ಕರು ಹೊರಗೆ  ತೆಗೆದುಕೊಂಡು ಬಂದು ಊರಿನವರಿಗೆ ಕೇಳಿದಾಗ ಆ ಕರುವಿನ ವಾರಸುದಾರರು ಸಿಗದೇ ಹೋದರು. ಕೊನೆಗೆ ಮನೆಗೆ ತೆಗೆದುಕೊಂಡು ಹೋಗಲು ಅವರ ತಂದೆಗೆ ಗೌರಿ ಆಸೆಯಿಂದ  ಕೇಳಿದಳು. ವಾರಸುದಾರರು ಯಾರೂ ಇರದ ಕಾರಣ ಅವಳ ತಂದೆಗೂ ಅದು ಸರಿಯೆನಸಿ ಮನೆಗೆ ತಂದು ಸಾಕತೊಡಗಿದರು.

   


ಗೌರಿ ಆ ಕರುವಿಗೆ ತುಂಗಾ ಎಂದು ನಾಮಕರಣ ಮಾಡಿದಳು.ತುಂಗಾ ಹಾಗೂ ಗೌರಿ ಸಹೋದರಿಯರಂತೆ ಬೆಳೆಯತೊಡಗಿದರು.ತುಂಗೆಯನು ಕಂಡರೆ ಗೌರಿಗೆ ಬಹಳ ಒಲುಮೆ.ನಿಂತರೂ ಕುಂತರೂ ಅದರದೇ ಯೋಚನೆ.ಶಾಲೆಗೆ ಹೋದರೂ ನಡುನಡುವೆ ಬಂದು ತುಂಗೆಗೆ ನೀರು ಕುಡಿಸಿ,ಮೇವು ಹಾಕಿ ಹೋದರೆ ಅವಳಿಗೆ ಸಮಾಧಾನ.ಶಾಲೆಗೆ ರಜೆ ಇರುವಾಗ  ಹೊಲಗಳಿಗೆ ಹಿಡಿದುಕೊಂಡು ಹೋಗಿ ಮೇಯಿಸಿಕೊಂಡು  ಬರುವುದೆಂದರೆ ಅವಳಿಗೆ ಬಹಳ ಖುಷಿ.ತುಂಗೆ ಹಸು ಗೌರಿಯ ಮನೆಗೆ ಬಂದು ಮೂರು ವರುಷಗಳ ನಂತರ ಹಾಕಿರುವ 'ಕರು' ತುಂಗೆಗೆ ಮೊದಲ ಹೆರಿಗೆಯಾಗಿದೆ.































ತನಗೆ ಸಾಕಿ ಸಲುಹಿದ ಮನೆಯವರ ಉಪಕಾರ ತೀರಿಸಲೋ ಎಂಬಂತೆ ಕರುವಿಗೆ ಜನುಮ ನೀಡಿದೆ.ತುಂಗೆಯ ಕರು ಮೂರುವರುಷದ‌ ಹಿಂದೆ ಪೊದೆಗಳೊಳಗೆ ದೊರೆತ ತುಂಗೆಯಂತೆಯೇ ಗೌರಿಗೆ ಕಂಡುಬಂದಿತು.ಈ 'ವಿಶೇಷ ಅತಿಥಿ'  ನನಗಾಗಿಯೇ ನೀಡಿದ ಕಾಣಿಕೆ ಎಂದು ತಿಳಿದುಕೊಂಡು ಗೌರಿ ತುಂಗೆಯ ಬಳಿ ಬಂದು ಸಂತೋಷದಿಂದ ಅದರ ಕೊರಳನು ಹಿಡಿದು ಆಲಂಗಿಸಿಕೊಂಡಳು.

By RSPatil Laxmeshwar.

         

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಂದಿರನ ಲೋಕದಲಿ