ಗೊಂಬೆಯಾಟದ ಹುಡುಗಿ


 


"ಗೊಂಬೆ ನೋಡು ಗೊಂಬೆ

ಚಂದ ಚಂದ ಕುಣಿಯುವ ಗೊಂಬೆ

ರಾಗದಿ ಹಾಡನು ಹಾಡುವ ಗೊಂಬೆ

ಅಂದದಿ ನಾಟಕವಾಡುವ ಗೊಂಬೆ

ಗೊಂಬೆ ನೋಡು ಗೊಂಬೆ"

     ಎಂಬ ಹಾಡಿನ ಪದ ಸರಾಗವಾಗಿ ಆರಂಭವಾಗುವ ವೇಳೆಗೆ ಲಂಗ ದಾವಣಿ ಹಾಕಿದ ಹುಡುಗಿ ಅಡುಗೆ ಮಾಡಿದ ಡಬರಿಗಳು ಹಾಗೂ ಊಟ ಮಾಡಿದ ತಾಟುಗಳ ತೆಗೆದುಕೊಂಡು ತೊಳೆಯಲು ಅಣಿಯಾಗುವಳು.ದಿನವೂ ಅವಳಿಗೆ ಇದೊಂದೇ ಕೆಲಸ ಮಾಡಿದರೂ ಬೇಸರವಾಗದು ಏಕೆಂದರೆ ಬೇಗನೇ ಕೆಲಸ ಮುಗಿಸಿ ಗೊಂಬೆಯಾಟದ ಕುಣಿಯುವ ಗೊಂಬೆಗಳ ಮುಂದೆ ಕುಳಿತರೆ ಅವಳಿಗೆ ಹೊಸ ಲೋಕವೇ ಉದಯವಾಗುವುದು.

   


ಗೊಂಬೆಯಾಡಿಸುವವರ ಮಗಳು ಈ  ಹುಡುಗಿ. 
ಊರಿಂದೂರಿಗೆ ಅಲೆದು ಗೊಂಬೆಯಾಡಿಸುವುದು ಅವರ ಕುಲ ಕಸಬು.ಇಡೀ ಸಂಸಾರವೇ ಒಂದು ಬಂಡಿಯ ಮೇಲೆ ಚಲಿ‌ಸಿ ಸಂಜೆಯಾದ ನಂತರ ತಲುಪಿದ ಊರಿನ ಗುಡಿ ಅಥವಾ ಶಾಲೆಗಳ ಮುಂದೆ ಬಿಡಾರ ಹೂಡಿ ಕಿರಿದಾದ ರಂಗಮಂಟಪ ಮಾಡಿಕೊಂಡು ಬಿಳಿ ಪರದೆ ಹಾಕಿ ಗೊಂಬೆಯಾಟ ಆಡಿಸುವುದು ದಿನವಹಿ ಕಾಯಕ. ಹುಡುಗಿಯ ತಂದೆ-ತಾಯಿ, ಅವಳಿಗಿಂತ ಕಿರಿಯವನಾದ ಸಹೋದರ, ಕಾಕಾ- ಕಾಕಿ, ಹಾಗೂ ಅವರ ಮಗಳು ಇದೇ ಗೊಂಬೆಯಾಟದವರ ಸಂಸಾರ. ಹುಡುಗಿಯ ತಂದೆ ಹಾಗೂ ಕಾಕಾ ಗೊಂಬೆ ಆಡಿಸುವುದರ ಜೊತೆಗೆ ಪದ ಹಾಡುವುದು ಹಾಗೂ ಸಂಭಾಷಣೆ ಹೇಳುವುದು ಮಾಡುವರು. ಹುಡುಗಿಯ ತಾಯಿ ಹಾಗೂ ಕಾಕಿ ಗೊಂಬೆಯಾಟದ ಮಹಿಳಾ ಗೊಂಬೆಗಳ ಸಂಭಾಷಣೆ ಹೇಳುವರು.

    ತಾಯಿ ಹಾಗೂ ಕಾಕಿ ಬೇಗನೆ ಅಡುಗೆ ಮುಗಿಸಿದರೆ ತಂದೆ ಹಾಗೂ ಕಾಕಾ ಗೊಂಬೆ ಆಡಿಸಲು ತಯಾರಿ ಮಾಡಿ ಮುಗಿಸಿ ಬಂದು ಊಟ ಮಾಡುವರು. ಅದುವರೆಗೂ ಹುಡುಗಿ ಕಿರಿಯ ಸಹೋದರ ಹಾಗೂ ಸಹೋದರಿಯರಿಗೆ ಆಟವಾಡಿಸುವುದು, ಊಟ ಮಾಡಿಸಿ ಮಲಗಿಸುವುದು ಮುಂತಾದ ಕೆಲಸ ಮಾಡುವಳು.

   


ಗೊಂಬೆಯಾಟ ಮುಗಿದ ನಂತರ ಜೋಪಾನದಿಂದ ಗೊಂಬೆಗಳ ತೆಗೆದು ಇಡುವುದು ಹುಡುಗಿಗೆ ಬಹಳ ಸಂತೋಷದ ಕೆಲಸ. ಒಂದೊಂದು ಗೊಂಬೆ ಹಿಡಿದು ಮಾತನಾಡಿಸಿ ಮಡಲಿನೊಳಗೆ ಮಲಗಿಸಿಕೊಂಡು ಊಟ ಮಾಡಿಸುವ ತರಹ ಮಾಡಿ ಗೊಂಬೆ ಇಡಲು ಮಾಡಿರುವ ಸಂದೂಕದೊಳಗೆ ಸೇರಿಸಿ ಬೀಗ ಹಾಕಿ ಮಲಗುವಳು.


ಮಲಗಿದ ಕೆಲವು ಸಮಯದ ನಂತರ ಗೊಂಬೆಗಳಿಗೆ ಜೀವ ಬಂದು ಹುಡುಗಿಯ ಬಳಿ ತೆರಳಿ "ಬಾ ನಾವು ನೀನು ಆಟ ಆಡೋಣ" ಎಂದು ಹೇಳಿ ಗೊಂಬೆ ಲೋಕಕೆ ಕರೆದುಕೊಂಡು   
ಹೋಗುವವು.ಗೊಂಬೆಗಳ ಲೋಕದಲಿ ಹುಡುಗಿ ಹೂವಾಗಿ ಅರಳುವಳು,ಕೋಗಿಲೆಯಾಗಿ ಹಾಡುವಳು,ಜೇನಾಗಿ ಮಧು ಹೀರುವಳು, ಜಲಪಾತವಾಗಿ ಧುಮುಕುವಳು.ಹಸಿವೆಯ ಪರಿವೇ ಇರದ ಗೊಂಬೆಗಳ ಲೋಕದಲಿ ಮನಸು ತುಂಬಿ ಆಡಿ ನಲಿಯುವಾಗ "ರವಿಯ ಕಿರಣಗಳು ಮುಖದ ಮೇಲೆ ಬೀಳುವ ಸಮಯವಾಯಿತು ಏಳು ಮೇಲೆ" ಎಂಬ ತಾಯಿಯೂ ನುಡಿ ಕೇಳಿ ತುಟಿಯ ಮೇಲೆ ನಸುನಗೆ ತುಂಬಿಕೊಂಡು ಹುಡುಗಿ ಕನಸಿನ ಲೋಕದಿಂದ ಹೊರಬಂದು ಮುಂಜಾನೆಯ ಕೆಲಸಗಳಿಗೆ ತೊಡಗುವಳು.

  ತಿಳುವಳಿಕೆ ಬಂದಾಗಿನಿಂದ ಹುಡುಗಿಗೆ ಈ ಗೊಂಬೆಗಳು ಪರಿಚಿತ. ಗೊಂಬೆಗಳೇ ಗೆಳೆಯ ಗೆಳತಿಯರು. ರಾಮಾಯಣದ ರಾಮ, ಸೀತೆ, ಹನುಮ, ರಾವಣ ಅಥವಾ ಮಹಾಭಾರತದ ಪಾಂಡವರು, ಕೌರವರು ಯಾವುದೇ ಗೊಂಬೆಗಳಿರಲಿ ಚಿರಪರಿಚಿತ. ಹಾಗೆಯೇ ಗೊಂಬೆಗಳ ಜೊತೆ ಬೆಳೆದು ಗೊಂಬೆಯಾಟದ ಸಂಭಾಷಣೆ ದಿನವೂ ಕೇಳಿ ಕೇಳಿ ತಾನೂ ಸಂಭಾಷಣೆ ಹೇಳುವುದು ಕರಗತ ಮಾಡಿಕೊಂಡಳು.

   


ಶಾಲೆಗೆ ಹೋಗಲು ಅವಕಾಶವೇ ಇರದ ವಾತಾವರಣದೊಳಗೆ ಬೆಳೆದು ಓದು-ಬರಹ ಏನೊಂದೂ ಅರಿಯದ ಹುಡುಗಿ ರಾಮಾಯಣ-ಮಹಾಭಾರತದ ಗೊಂಬೆಯಾಟದ ಕಠಿಣ ಸಂಭಾಷಣೆ ಹೇಳುವುದು ಕೇಳಿ ಅವಳ ತಂದೆ-ತಾಯಿಯವರಿಗೆ ಸೋಜಿಗದ ಜೊತೆಗೆ ಗರಿಮೆಯ ವಿಷಯವಾಯಿತು. ಹೀಗೆ ಗೊಂಬೆಯಾಟ ದೊಡನೆ ಬೆಳೆಯತೊಡಗಿದ ಹುಡುಗಿ ತಾನೂ ಅದೇ ಕಾಯಕವ ಮುಂದುವರಿಸಿಕೊಂಡು ಹೊರಟಳು. ಗೊಂಬೆಯಾಟದೊಳಗೆ ನವನವೀನ ಬದಲಾವಣೆ ಮಾಡಿಕೊಂಡು ಹೊಸರೂಪ ನೀಡಿದಳು.ಗೊಂಬೆಗಳೊಡನೆ ಅವಳ ಒಡನಾಟ, ಗೊಂಬೆಯಾಟ ದೊಳಗೆ ಆಧುನಿಕತೆಯ ಮಿಳಿತ, ಹೊಸಬಗೆ ಸಂಭಾಷಣೆಯ ಮಾದರಿ ಹೀಗೆ ಮುಂತಾದ ನವೀನ ಮಾದರಿಗಳಿಂದ ಗೊಂಬೆಯಾಟದ ಹುಡುಗಿ ದೇಶ-ವಿದೇಶಗಳ ಒಳಗೂ ಹೆಸರುವಾಸಿಯಾದಳು.

By RSPATIL, Laxmeshwar.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಂದಿರನ ಲೋಕದಲಿ