ಗೋಪಿಯ ಗಾಳಿಪಟ
ಶಾಲೆಗೆ ರಜೆ ಬಂತೆಂದರೆ ಗಾಳಿಪಟ ಹಾರಿಸುವುದು ಗೋಪಿಗೆ ತುಂಬಾ ಸಂತೋಷದ ಆಟವಾಗಿದೆ. ಕಲರ್ ಕಲರ್ ಹಾಳೆಗಳ ಗಾಳಿಪಟ ತಯಾರಿಸಿಕೊಂಡು ಊರಿನ ಸಮೀಪದ ವಿಶಾಲ ಬಯಲಿನಲಿ ಗೆಳೆಯರ ಜೊತೆಗೂಡಿ ಗಾಳಿಪಟ ಹಾರಿಸುವ ಗೋಪಿಗೆ ಸಮಯದ ಪರಿವೇ ಇರದು. ಮುಂಜಾನೆ ತಿಂಡಿ ತಿಂದು ಹೊರಡುವ ಗೋಪಿ ಸಂಜೆಯವರೆಗೂ ಗಾಳಿಪಟ ಹಾರಿಸಿ ಮನೆಗೆ ಬಂದಾಗಲೇ ಅವನಿಗೆ ಹಸಿವಿನ ಅರಿವಾಗುವುದು. ಲಗುಬಗೆಯಿಂದ ಏನಾದರೂ ತಿಂದು ಗೆಳೆಯರ ಮನೆಗೆ ಹೋಗಿ ಗಾಳಿಪಟ ತಯಾರಿಸಲು ಅವರಿಗೆ ಸಹಾಯ ಮಾಡಿ ಮಲಗುವ ಸಮಯಕೆ ಮನೆಗೆ ಹಿಂದಿರುಗಿ ಬರುವನು.
ಒಂದು ದಿನ ಗೆಳೆಯರು ಕೂಡಿಕೊಂಡು ಗಾಳಿಪಟ ಹಾರಿಸುವ ಆಟದಲಿ ತೊಡಗಿರುವಾಗ ಗೋಪಿಯ ಗಾಳಿಪಟ ತುಂಬಾ ಮೇಲೆ ಹಾರುವುದನು ಕಂಡು ಅವನ ಗೆಳೆಯ ಶೀನು ಸಹಿಸಲಾರದೇ ಗೋಪಿಯ ದಾರ ಕಸಿದುಕೊಂಡು ಜೋರಾಗಿ ಎಳೆದು ಹರಿದುಹಾಕಿದನು. ಇದರಿಂದ ಗೋಪಿ ಕೋಪಿಸಿಕೊಂಡು ಅವನ ಜೊತೆ ಜಗಳವಾಡಿದನು. ಜಗಳವಾಡುವಾಗ ಗೋಪಿಯ ಅಂಗಿ ಹರಿದು ಹೋಯಿತು. ಇದರಿಂದ ಗೋಪಿಗೆ ಅವಮಾನವಾದಂತಾಗಿ ಮನೆಗೆ ಓಡಿಬಂದು ತಾಯಿಗೆ ನಡೆದ ವಿಚಾರ ತಿಳಿಸಿದನು. ತಾಯಿ ಗೋಪಿಗೆ ಸಮಾಧಾನ ಮಾಡಿ "ನೋಡು ನೀನು ಹೀಗೆ ಜಗಳ ಮಾಡುವುದಾದರೆ ನಾಳೆಯಿಂದ ಗಾಳಿಪಟ ಹಾರಿಸಲು ಹೋಗುವುದೇ ಬೇಡ" ಎಂದು ತಾಕೀತು ಮಾಡಿದರು.
ಮಾರನೇ ದಿನ ಗೋಪಿ ಗೆಳೆಯರು ಗಾಳಿಪಟ ಹಾರಿಸಲು ಗೋಪಿಯನು ಕರೆತರಲು ಅವರ ಮನೆ ಬಳಿ ಹೋದಾಗ ಗೋಪಿಯ ತಾಯಿ ಅವರಿಗೆ ಗದರಿಸಿ ಕಳುಹಿಸಿದರು.ಜೋಲುಮೋರೆ ಮಾಡಿಕೊಂಡು ಗೆಳೆಯರು "ಗೋಪಿ ಬರದೇ ನಾವು ಗಾಳಿಪಟ ಹಾರಿಸುವುದು ಬೇಡವೇ ಬೇಡ" ಎಂದು ಮಾತನಾಡಿಕೊಂಡು ಹೊರಟುಹೋದರು.
ಗಾಳಿಪಟ ಹಾರಿಸುವ ಹುಡುಗರಿಂದ ಸದಾ ಚಟುವಟಿಕೆಯಿಂದ ಕೂಡಿರುವ ಊರ ಹೊರಗಿನ ವಿಶಾಲ ಜಾಗ ಖಾಲಿ ಖಾಲಿ ಅನಿಸತೊಡಗಿತು. ಗಾಳಿಪಟಗಳಿಂದ ತುಂಬಿ ತುಳುಕುವ ಆಕಾಶವು ಬರಿದಾಗಿ ಕಾಣತೊಡಗಿತು. ಮೋಡಗಳೂ ಕೂಡ ಮಂಕಾದಂತೆ ಕಂಡುಬಂದವು. ಕಲರ್ ಕಲರ್ ಗಾಳಿಪಟಗಳ ನಡುವೆ ಖುಷಿಯಿಂದ ಹಾರಾಡುವ ಪಾರಿವಾಳಗಳು ಖಾಲಿ ಆಕಾಶ ನೋಡಿ ಬೇಜಾರುಗೊಂಡು ಹಾರದೇ ಕುಳಿತವು.
ಒಂದು ದಿನ ಕಳೆದ ನಂತರ ಗೋಪಿಯ ಜೊತೆ ಜಗಳವಾಡಿಕೊಂಡ ಶೀನನಿಗೆ ತುಂಬಾ ದುಃಖವಾಯಿತು. ಸುಂದರವಾದ ಗಾಳಿಪಟ ತಯಾರು ಮಾಡುವುದನು ತನಗೆ ಕಲಿಸಿದ ಗೋಪಿಯ ಜೊತೆ ಜಗಳವಾಡಿ ಅವನ ಅಂಗಿ ಹರಿದು ಅವಮಾನ ಮಾಡಿ ಕಳುಹಿಸಿದ ಘಟನೆ ನೆನಪಾಗಿ ಬೇಜಾರದಿಂದ ಅಳತೊಡಗಿದನು.ಶೀನುವಿನ ತಾಯಿ ಅವನ ಬಳಿ ಬಂದು ಅಳುವ ಕಾರಣ ಕೇಳಿ ಅಳಬೇಡ ಎಂದು ಹೇಳಿ ಸಮಾಧಾನಪಡಿಸಿದರು. ನಂತರ ಶೀನುವಿನ ಜೊತೆ ಹೋಗಿ ಗೋಪಿ ಹಾಗೂ ಅವನ ತಾಯಿಗೆ ಭೇಟಿಯಾದರು. ಗೋಪಿಯನು ಕಂಡು ಶೀನು ಅಳತೊಡಗಿದನು.ಗೋಪಿಯೂ ಅಳತೊಡಗಿದನು. ಅವರ ತಾಯಂದಿರು ಮುಖದಲಿ ನಗು ತಂದುಕೊಂಡು ಅವರಿಗೆ ಸಮಾಧಾನಪಡಿಸಿದರು. ಗೋಪಿಯ ತಾಯಿ ಗೋಪಿಗೆ ಗಾಳಿಪಟ ಹಾರಿಸಲು ಅನುಮತಿ ನೀಡಿದರು. ಇದರಿಂದ ಗೋಪಿ ತುಂಬಾ ಸಂತೋಷಗೊಂಡು ಗಾಳಿಪಟ ತೆಗೆದುಕೊಂಡು ಶೀನುವಿನ ಜೊತೆ ಓಡಿ ಹೋಗಿ ಬಯಲಿನಲಿ ಗಾಳಿಪಟ ಹಾರಿಸತೂಡಗಿದನು.ಗೋಪಿಯ ಗಾಳಿಪಟ ಆಕಾಶದಲಿ ಹಾರುವುದನು ಕಂಡು ಅವನ ಗೆಳೆಯರು ಬಯಲಿಗೆ ಖುಷಿಯಿಂದ ಓಡೋಡಿ ಬಂದರು.
ಕಲರ್ ಕಲರ್ ಗಾಳಿಪಟಗಳು ನೀಲಿಯಾಗಸದಲಿ ಮೊದಲಿನಂತೆಯೇ ಹಾರತೂಡಗಿದವು.
BY RSPATIL, LAXMESHWAR





ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ