ಶಾಲೆಯೆಂಬ ಸ್ವರ್ಗದ ತುಣುಕು

 ಶಾಲೆಯೆಂಬ ಸ್ವರ್ಗದ ತುಣುಕು


         ತುಂಗಭದ್ರೆಯನ್ನು ಅನ್ನದಾತರ ಗದ್ದೆಗಳಿಗೆ ಕರೆದುಕೊಂಡು ಸಾಗುವ ಅದೊಂದು ಪುಟ್ಟ ಕಾಲುವೆ.ಕಾಲುವೆಯ ಒಂದು ಬದಿಯಲ್ಲಿ ಹಸಿರು ಸಿರಿ ಹೊದ್ದ ಗದ್ದೆಗಳು ಮತ್ತೊಂದು ಬದಿಯಲ್ಲಿ ಬೆರಳೆಣಿಕೆಯಷ್ಟು ಗುಡಿಸಲು ಮನೆಗಳು ಹಾಗೂ ತಾತ್ಕಾಲಿಕ ಟೆಂಟ್ ಗಳು.ರಸ್ತೆಯಿಲ್ಲ, ಚರಂಡಿಯಿಲ್ಲ, ಬೀದಿದೀಪಗಳಿಲ್ಲ, ವಿದ್ಯುತ್ ಸಂಪರ್ಕವಿಲ್ಲ ಇಷ್ಟೆಲ್ಲಾ ಇಲ್ಲಗಳ ಮಧ್ಯೆ ದೂರದೂರದ ಪ್ರದೇಶಗಳಿಂದ ಹೊಟ್ಟೆ ಚೀಲ ತುಂಬಿಸಿಕೊಳ್ಳಲು ನೆಲ್ಲು ತುಂಬುವ ಕಾರ್ಖಾನೆಗಳಿಗೆ ಕೆಲಸಗಾರರಾಗಿ ಬಂದವರು ಇಲ್ಲಿನ ನಿವಾಸಿಗಳು.ನೆಲದ ಒಡೆಯನಾರೋ ತಾತ್ಕಾಲಿಕ ಟೆಂಟ್ ಹಾಗೂ ಗುಡಿಸಲುಗಳಿಗೆ ಮಾತ್ರ ಇವರು ಒಡೆಯರು.  ಯಾವ ಸೌಲಭ್ಯಗಳು ಲಭ್ಯವಿಲ್ಲದ ಇಂತಿರ್ಪ ಊರಲ್ಲದ ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣೆಬರಹವೇ  ಇಲ್ಲದ ಕೂಲಿ ಕಾರ್ಮಿಕರ ಮಕ್ಕಳಿಗೆ ಬರಹ ಕಲಿಸಲು  ಎರಡು ಕೊಠಡಿಗಳ ಪುಟ್ಟ ಶಾಲೆ ಇಲ್ಲಿದೆ.ಶಾಲೆಯ ಮುಂದೆ ಕಿರುರಸ್ತೆ ಅದರಾಚೆ ಸದಾಕಾಲವೂ ತುಂಬಿ ಹರಿಯುವ ಕಾಲುವೆ.ಕಲಿಸುವುದಕ್ಕಿಂತ ಮಕ್ಕಳನ್ನು ಕಾಯುವುದೇ ಬಹುಮುಖ್ಯ ಕೆಲಸ.ಶಾಲೆಯೂ ಊರಿನಂತೆ ಸಾಕಷ್ಟು ಇಲ್ಲಗಳ ಮಧ್ಯೆಯೇ ಎದ್ದುನಿಂತ ನಾಲ್ಕು ಗೋಡೆಗಳ ಕಲ್ಲಿನ ಕಟ್ಟಡವಷ್ಟೇ.ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಇದ್ದಂತಿರುವ ಶಾಲೆಯ ರಕ್ಷಣಾ ಗೋಡೆದಾಟಿದರೆ ಗದ್ದೆ,ಗಟಾರ್ ಕಾಲುವೆಗಳ ದರ್ಶನ ಸಹಜ.

      ಹೀಗೆ ಆಧುನಿಕ ಕಾಲದಲ್ಲಿಯೂ ಒಂದು ಅಚ್ಚರಿಯನ್ನುವಂತಹ ಊರಿನ ಶಾಲೆಗೆ ಬಂದ ಶಿಕ್ಷಕರು ಕಲಿಸಿದ್ದಕ್ಕಿಂತ ಗೊಣಗಿದ್ದೇ ಹೆಚ್ಚು. ಬಂದವರಾರೂ ಬಹಳ ವರ್ಷ ಸೇವೆ ಸಲ್ಲಿಸುವ ಗೋಜಿಗೆ ಹೋಗದೇ ಸಿಕ್ಕ ಅವಕಾಶ ಬಳಸಿಕೊಂಡು ಮತ್ತೊಂದು ಶಾಲೆಗೋ ಮತ್ತೊಂದು ಊರಿಗೋ ವರ್ಗಾವಣೆ ಹೋದವರೇ ಹೆಚ್ಚು. 2007ರಲ್ಲಿ ಶಾಲೆಗೆ ಬಂದು ಇಲ್ಲಿಯವರೆಗೂ ಯಾವ ವರ್ಗಾವಣೆಯ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಇರುವ ಸೌಲಭ್ಯಗಳಲ್ಲಿಯೇ ಒಂದು ಅತ್ಯುತ್ತಮ ವಾತಾವರಣ ನಿರ್ಮಿಸಿದ ತ್ಯಾಗಮಯಿ ಶಿಕ್ಷಕರೆಂದರೆ

ಶ್ರೀ ಕಳಕೇಶ್ ಗುಡ್ಲಾನೂರ್ ಅವರು. ಮೂಲತಃ ಮುಂಡರಗಿಯವರಾದ ಇವರು ಲೇಖಕರು, ಬರಹಗಾರರು, ಕವಿಗಳು, ವಿಮರ್ಶಕರು ಇನ್ನು ಹೆಚ್ಚಾಗಿ ಕಲಾಲೋಕದ ಮೇರು ತಾರೆಗಳ ಒಡನಾಡಿಗಳು. ಸಾಹಿತ್ಯ ಲೋಕದ ಸಾಕಷ್ಟು ಹೊಸ ಪ್ರತಿಭೆಗಳು ಇವರ ಸ್ನೇಹಲೋಕದ ಸವಿಯುಂಡವರು. ಹೀಗೆ ವೈವಿಧ್ಯಮಯ ವೈಚಾರಿಕತೆಯ ಪ್ರಖರತೆ, ರಚನಾತ್ಮಕತೆ ಹಾಗೂ  ಸೃಜನಾತ್ಮಕತೆಯನ್ನು ಮೈಗೂಡಿಸಿಕೊಂಡ ಕಳಕೇಶ್ ಅವರು ತಮ್ಮ ಶಾಲೆಯನ್ನೇ ಒಂದು ಕ್ಯಾನ್ವಾಸ್ ಮಾಡಿಕೊಂಡು ಮೂಡಿಸಿದ ಬಣ್ಣದ ಲೋಕ ಒಂದು ಅದ್ಭುತವಾಗಿ ಇಂದು ಕಂಗೊಳಿಸುತ್ತಿದೆ




ಲಭ್ಯವಿರುವ ಕಿರು ಜಾಗದಲ್ಲಿಯೇ ನಿರ್ಮಾಣಗೊಂಡು ಸುಂದರ ಲೋಕದಂತೆ ಪರಿವರ್ತಿತವಾದ  ಶಾಲೆಯ ದ್ವಾರಬಾಗಿಲ ಎದುರುಗಡೆ ನಿಂತ ಕ್ಷಣ ಕಣ್ಣಿಗೆ ಬೀಳುವುದು ಬಣ್ಣ ಹಚ್ಚಿಕೊಂಡು ಕಂಗೊಳಿಸುತ್ತಿರುವ ಹಳೆಯ ಟೈರುಗಳ ಸ್ವಾಗತ ಕಮಾನುಗಳು. ಚಿತ್ತಾರ ಬಳಿದುಕೊಂಡು ಅಕ್ಷರಗಳ ಮಾಲೆ ತೊಟ್ಟುಕೊಂಡು ನಿಂತ ಶಾಲೆಯ ರಕ್ಷಣಾ ಗೋಡೆಗಳು. ನೇರವಾಗಿ ಎದುರಿಗೆ ದಪ್ಪನೆಯ ಬಿಳಿ ಬಣ್ಣದಿಂದ ಬರೆದ ಬರಹ 'ಅರಿವಿನ ಅಂಗಳ' ಎಂಬ ಅಕ್ಷರಗಳನ್ನು ಹೊತ್ತು ನಿಂತ ಸಾಂಪ್ರದಾಯಿಕ ಕ್ಯಾವಿ ಬಣ್ಣದ ಎತ್ತರದ ಗೋಡೆ.(ಕಟ್ಟಡ ಕಾರ್ಮಿಕರು ಅರ್ಧಕ್ಕೆ ನಿಲ್ಲಿಸಿ  ಕೈಕೊಟ್ಟು ಹೋದಾಗ ಶಿಕ್ಷಕರೇ ಪೂರ್ತಿಗೊಳಿಸಿದ ಗೋಡೆ ಇದು) ಗೋಡೆಗೆ ಅಂಟಿಕೊಂಡೇ ನಿರ್ಮಿತವಾದ ಒಂದು ಕೂಡುವ ಕಟ್ಟೆ. ಅದು ಬರಿ ಗೋಡೆ ಹಾಗೂ ಕಟ್ಟೆಯಲ್ಲ ಅದೊಂದು ಕಿರು ವೇದಿಕೆ. ವೇದಿಕೆ ಮೇಲೆ ನೆರಳು ಬಿಸಿಲಿನ ಹೊಯ್ದಾಟದಡಿಯಲ್ಲಿ ಮಕ್ಕಳ ಕಲರವ. ಅರಿವಿನ ಅಂಗಳ ವೇದಿಕೆ ಬಲಬದಿಯಲ್ಲಿ ಧ್ವಜ ಕಂಭ.ಧ್ವಜಕಂಭದ ಹತ್ತಿರವೇ ಸಂವಿಧಾನ ಪೀಠಿಕೆಯನ್ನು ಹೊತ್ತು ನಿಂತ ವಿಶೇಷ ಫಲಕ. ಬಲಬದಿ ಗೋಡೆಗೆ ಹತ್ತಿಕೊಂಡೇ  ಒಂದೊಂದು ಇಟ್ಟಿಗೆಯನ್ನು ಇಟ್ಟು ನಿರ್ಮಿಸಿದ ಹಸಿರು ತುಂಬಿದ ಕಿರು ಉದ್ಯಾನವನ. ಉದ್ಯಾನವನದ ಒಳಗಡೆ ಅಲ್ಲಲ್ಲಿ ಇಂಗ್ಲಿಷ್- ಕನ್ನಡ ವೆಜಿಟೇಬಲ್, ಫ್ರೂಟ್ಸ್ ಹಾಗೂ ಹಲವು ಬಗೆಯ ಕಲಿಕಾ ಚಾರ್ಟ್ ಗಳು. ಮಧ್ಯದಲ್ಲಿ ಅಲ್ಲಲ್ಲಿ ಕೂಡ್ರುವ ಕಟ್ಟೆಗಳನ್ನು ನಿರ್ಮಿಸಿ ಉದ್ಯಾನವನಕ್ಕೆ ಒಂದು ವಿಶೇಷ ಮೆರಗನ್ನು ನೀಡಿದ್ದಾರೆ. ರಕ್ಷಣಾ ಗೋಡೆಗಳ ಮೇಲೆ ಹಲವಾರು ಕಲಾ ಪ್ರಕಾರಗಳ ಮುಖಚರ್ಯೆಗಳು, ಪ್ರತಿ ಇಂಚು ಜಾಗ ಬಿಡದೇ ಬರಹಗಳಿಂದ ತುಂಬಿ ತುಳು ಕುತ್ತಿರುವ ಶಾಲಾ ಕೊಠಡಿಗಳ ಗೋಡೆಗಳು ಅಬ್ಬಬ್ಬಾ ಈ ಶಿಕ್ಷಕರ ಸೃಜನಾತ್ಮಕತೆಗೆ ಒಂದು ಬಿಗ್ ಸೆಲ್ಯೂಟ್.



         



ಪ್ರಾಚೀನ ಭಾರತೀಯ ವಿಶೇಷ ಕಲಾಪರಂಪರೆಯಾದ 'ವರ್ಲಿ' ವಿಧಾನದಿಂದ ಗ್ರಾಮೀಣ ಸೊಗಡಿನ ಸುಂದರ ಕಲಾಕೃತಿಗಳು ಶಾಲಾ ಕೊಠಡಿಗಳ ಗೋಡೆ ತುಂಬಾ ರಾರಾಜಿಸುತ್ತಿವೆ. ಅಡುಗೆ ಕೋಣೆಯ ಗೋಡೆಯ ಮೇಲೆ ಮರ ಗಿಡಗಳು, ಹುಲ್ಲಿನಹಾಸು, ಅರಳಿದ ಹೂಗಳು ಅದರ ಕೆಳಗಡೆ ಈಜುತ್ತಿರುವ ಮೀನುಗಳು ನೈಜವೇ ಅನ್ನುವಷ್ಟು ರಚಿತವಾಗಿವೆ. 'ಪರಿಶುದ್ಧವಾದ ಜಲ ಜಗತ್ತಿನ ಮೊದಲ ಔಷಧಿ' ಎಂಬ ಕುಡಿಯುವ ನೀರಿನ ತೊಟ್ಟಿಯ ಗೋಡೆಯ ಮೇಲೆ ಬರೆಯಿಸಿದ ಬರಹ ಪ್ರತಿಯೊಬ್ಬರ ಕಣ್ಣು ತೆರೆಸುವಂತಿದೆ.ಅದರ ಮೇಲೆಯೇ ಸಂಜೆಗತ್ತಲ ಹಿನ್ನೆಲೆಯಲ್ಲಿ ರಚಿತ ಜಲಚರಗಳು, ದೋಣೆ, ದಂಡೆ, ದಂಡೆಯ ಮೇಲಿನ ಮರ, ಪಕ್ಷಿಗಳು ವಾವ್! ಒಂದು ಜಲಲೋಕ ಪುಟ್ಟ ನೀರಿನ ತೊಟ್ಟಿಯ ಮೇಲೆ ಅನಿರ್ಭವಿಸಿದೆ ಎಂದರೇ ತಪ್ಪಾಗಲಾರದು.

   




 

'ಕಲಿಕೆಯ ಖುಷಿ ಪಯಣ' ಎಂಬ ಅಡಿಬರಹ ಹೊತ್ತ 'ಮರಳು ಅರಳು' ಎಂಬ ಫಲಕ ಪ್ರತಿಯೊಬ್ಬರಿಗೂ ಕೂತುಹಲ ಉಕ್ಕಿಸುವಂತಿದೆ. ಅಡುಗೆ ಕೋಣೆ ಹಾಗೂ ಶಾಲಾ ಕೊಠಡಿಯ ಮಧ್ಯ ಭಾಗದಲ್ಲಿ ಇರುವ ಸ್ವಲ್ಪವೇ ಜಾಗದಲ್ಲಿ ಸುತ್ತಲೂ ಹೃದಯದ ಆಕಾರದಲ್ಲಿ ಕಿರುಗೋಡೆ ನಿರ್ಮಿಸಿ ಅದರೊಳಗೆ ಮರಳನ್ನು ಹಾಕಲಾಗಿದೆ. ಮರಳೆಂದರೆ ಬಲು ಇಷ್ಟಪಡುವ ಮಕ್ಕಳು ಇಲ್ಲಿ ಆಡುವುದರ ಜೊತೆಗೆ ಏನನ್ನಾದರೂ ಬರೆಯುವ, ಚಿತ್ರ ಬಿಡಿಸುವ ಮೂಲಕ ಆಟದೊಂದಿಗೆ ಕಲಿಕೆಯಲ್ಲಿ ತೊಡಗಿ ಕೊಳ್ಳುವ ವಿನೂತನ ವಿಧಾನವಾಗಿದೆ. ನಿಜಕ್ಕೂ ಇದೊಂದು ಶಿಕ್ಷಕರ ಅದ್ಭುತ ಯೋಚನಾ ಲಹರಿಯಿಂದ ಮೂಡಿ ಬಂದ ರಚನಾತ್ಮಕ ವ್ಯವಸ್ಥೆಯಾಗಿದೆ. 'ಅನುಕೂಲ' (ಉಳಿಸಿದ ಹಣವೇ ಗಳಿಸಿದ ಹಣ) ಎಂಬ ಮಕ್ಕಳ ಶಾಲಾ ಬ್ಯಾಂಕ್ ಸ್ಥಾಪಿಸಿದ್ದು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಉಳಿತಾಯದ ಮಹತಿಯನ್ನು ಅರಿಯುವಂತೆ ಮಾಡಿದ್ದಾರೆ.ಹಾಗೆಯೇ ಅಡುಗೆ ಕೋಣೆ ಮುಂದೆ ಇರುವ ಒಂದು ಮರಕ್ಕೆ ಹಗ್ಗದ ಜೋಕಾಲಿಯನ್ನು ಕಟ್ಟಿ ಅದಕ್ಕೆ ಗ್ರಾನೈಟಿನ ತುಂಡೊಂದನ್ನು ಸೇರಿಸಿ ಮಕ್ಕಳಿಗೆ 'ಜೋಕಾಲಿ ಜೀಕು' ಎಂಬ ಸ್ವರ್ಗ ಸುಖ ತಾಣ ಒದಗಿಸಿ ಕೊಟ್ಟಿದ್ದಾರೆ.





ಕಾಮನಬಿಲ್ಲಿನ ಹಲವಾರು ಬಣ್ಣಗಳಲ್ಲಿ ಮಿಂದೆದ್ದು ನಿಂತಂತೆ ಕಾಣುವ ಶಾಲಾ ಕೊಠಡಿಗಳ ಕಂಭಗಳು, ಸಂಖ್ಯೆಗಳ ಅಕ್ಷರಗಳ ಹಾಸನ್ನು ಹೊದ್ದು ಮಲಗಿದ ಊಟಕ್ಕೆ ಕೂರುವ ನೆಲ, ಕಾಲಿಬಿಟ್ಟ ಸೇಫ್ಟಿಕ ಟ್ಯಾಂಕಿನ ಮೇಲೂ ವರ್ಷ ಋತು ತಿಂಗಳುಗಳ ಚಿತ್ತಾರ, ಚಪ್ಪಲಿ ಬಿಡಲು ಒಂದು ಶಿಸ್ತುಬದ್ಧ ಜಾಗ ಹಾಗೂ ಸೂಕ್ತ ಬರಹ, ಐತಿಹಾಸಿಕ ಲೋಕಕ್ಕೆ ಕರೆದೊಯ್ಯುವ  ಗೋಡೆ ಮೇಲೆ ಚಿತ್ರಿಸಿದ ಕಲ್ಲಿನ ಕೋಟೆ ಹೆಬ್ಬಾಗಿಲು ಅಬ್ಬಾ! ಕಲ್ಪನೆ ಏಗುತ್ತದೆ ಇಲ್ಲಿ.ಮಧ್ಯಾಹ್ನ ಬಿಸಿಯೂಟದ ಸಂದರ್ಭದಲ್ಲಿ ಚಿಕ್ಕ ಸ್ಪೀಕರುಗಳ ಮೂಲಕ ಕೇಳಿಬರುವ ಕನ್ನಡದ ಶ್ರೇಷ್ಠ ಕವಿಗಳ ಭಾವಗೀತೆಗಳು ಮೈಮನಗಳನ್ನು ಪುಳುಕಿತಗೊಳಿಸುತ್ತವೆ.

       ಇಷ್ಟು ಭೌತಿಕ ಸಂಪತ್ತಾದರೆ ಬೌದ್ಧಿಕವಾಗಿಯೂ ಶಾಲಾ ಮಕ್ಕಳನ್ನು ಸಿರಿವಂತರನ್ನಾಗಿ ಮಾಡಲು ಭಗೀರಥ ಪ್ರಯತ್ನದಲ್ಲಿ ಶಿಕ್ಷಕರು ತೊಡಗಿಕೊಂಡಿದ್ದಾರೆ. ತೆಲುಗು ತಮಿಳು ಮರಾಠಿ ಹೀಗೆ ಭಾಷೆ ಬೇರೆ ಬೇರೆ ಆಗಿರುವ ಇಲ್ಲಿನ ಮಕ್ಕಳನ್ನು ಕನ್ನಡದ ವಾತಾವರಣಕ್ಕೆ ಹೊಂದಿಸುವಲ್ಲಿ ಶಿಕ್ಷಕರು ಪಡುವ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ವಿದ್ಯಾರ್ಥಿಗಳಿಗೆ ಗ್ರಂಥಾಲಯ ಪುಸ್ತಕಗಳು ಸದಾಕಾಲ ಲಭ್ಯವಾಗುವ ವ್ಯವಸ್ಥೆ ಮಾಡಿದ್ದಾರೆ. ಸಾಹಿತ್ಯದ ರುಚಿಯನ್ನು ಆಗಾಗ ಸಾಹಿತ್ಯ ಲೋಕದ ಗೆಳೆಯರನ್ನು ಕರೆಯಿಸಿ ಉಣಬಡಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವಲ್ಲಿ  ನಿರತರಾಗಿದ್ದು  ಸಾಮಾನ್ಯ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿ ಬೋಧನೆ ಕೈಗೊಳ್ಳುತ್ತಾರೆ.ಡಿಜಿಟಲ್ ವಸ್ತುಗಳ ಹಾಗೂ ತಂತ್ರಜ್ಞಾನದ ಬಳಕೆ ಇಲ್ಲಿನ ವಿದ್ಯಾರ್ಥಿಗಳಿಗೆ ಕರತಲಾಮಲಕ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿ ಸ್ಫರ್ಧೆಗಳಲ್ಲಿ ಹೆಚ್ಚಿನ ಪ್ರಥಮ ಸ್ಥಾನಗಳನ್ನು ಪಡೆದಿರುವುದು ಇಲ್ಲಿನ ಕಲಿಕೆಯ ಗುಣಮಟ್ಟವನ್ನು ಸಾಬೀತುಪಡಿಸುತ್ತದೆ. ವಿಶೇಷ ಸಾಧಕ ಸ್ನೇಹಿತರನ್ನು 'ಅರಿವಿನ ಅಂಗಳ' ವೇದಿಕೆಗೆ ಆಮಂತ್ರಿಸಿ ಅವರ ಸಾಧನೆಯನ್ನು ಪರಿಚಯಿಸಿ ಸಾಧಕರೊಂದಿಗೆ ವಿದ್ಯಾರ್ಥಿಗಳ ಸಂವಹನ ಏರ್ಪಡಿಸಿ ಅವರ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸುವ ಒಂದು ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸಿದ್ದಾರೆ.

   "ವಿದ್ಯಾರ್ಥಿಗಳೇ ನನ್ನ ಪ್ರೇರಕ ಶಕ್ತಿ" ಎಂದು ಸದಾ ಕಾಲ ಹೇಳುವ ಕಳಕೇಶ್ ಗುಡ್ಲಾನೂರ ಗುರುಗಳ ಬೆವರಫಲ ಈ ಶಾಲೆ ಕ್ಷಮಿಸಿ ಶಾಲೆಯಲ್ಲ.. ಒಂದು 'ಸುಂದರ ಕಲಾ ಕೃತಿ'; ವಿದ್ಯಾರ್ಥಿಗಳ ಪಾಲಿನ 'ಸ್ವರ್ಗದ ತುಣುಕು'.


       


         

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಂದಿರನ ಲೋಕದಲಿ